ಏಕೋತ್ತರ ಶತಸ್ಥಲಗಳು: ಲಿಂಗಸ್ಥಲ ಮತ್ತು ಅಂಗಸ್ಥಲಗಳು ಸೂಕ್ಷ್ಮಪ್ರಭೇದಗಳಿಂದ ನೂರೊಂದು ಸ್ಥಲಗಳಾಗಿ ಪರಿಣಮಿಸುವುದನ್ನೇ ರೇಣುಕ ಮೊದಲಾದ ಆಚಾರ್ಯರು ಮತ್ತು ಶಿವಶರಣರು ಏಕೋತ್ತರ ಶತಸ್ಥಲ ಎಂದು ವಿವರಿಸಿರುತ್ತಾರೆ. ಭಗವತ್ಪಾದ ಶ್ರೀ  ರೇಣುಕಾಚಾರ್ಯರು ಅಗಸ್ತ್ಯ ಮಹರ್ಷಿಗಳಿಗೆ ಬೋಧಿಸಿದ ಏಕೋತ್ತರ ಶತಸ್ಥಲಗಳು ಸಿದ್ಧಾಂತ ಶಿಖಾಮಣಿಯಲ್ಲಿ (ಶಿವಯೋಗಿ ಶಿವಾಚಾರ್ಯಕೃತ ಸು. 1000) ನಿರೂಪಿತವಾಗಿವೆ. ಈ ವಿಷಯದಲ್ಲಿ ಮಹಾಲಿಂಗದೇವನ (1425) ಏಕೋತ್ತರ ಶತಸ್ಥಲ, ಜಕ್ಕಣಾರ್ಯನ (1430)  
ನೂರೊಂದು ಸ್ಥಲಗಳು, ಗಿರೀಂದ್ರನ (ಸು. 1430) ಏಕೋತ್ತರ ಶತಸ್ಥಲ ಟೀಕೆ, ಮೊಗ್ಗೆ ಮಾಯಿದೇವನ (ಸು. 1430) ಏಕೋತ್ತರ ಶತಸ್ಥಲ (ಷಟ್ಪದಿ) ಇವು ಮುಖ್ಯ ಗ್ರಂಥಗಳು. 4 ಮತ್ತು 5ನೆಯ ಗ್ರಂಥಗಳು ಉಪಲಬ್ಧವಿಲ್ಲ. ಗುಬ್ಬಿ ಮಲ್ಲಣಾರ್ಯರ (1475) ಗಣಭಾಷಿತರತ್ನ  ಮಾಲೆಗಳಲ್ಲಿ ಉಕ್ತವಾಗಿರುವ ಏಕೋತ್ತರ ಶತಸ್ಥಲಗಳಲ್ಲಿ ತೋರುವ ಅಂತರವಿಷಯವನ್ನು ಅನುಭವಕ್ಕೆ ತಂದುಕೊಂಡ ಅನುಭಾವಿಗಳಲ್ಲಿ ಕಾಲಕಾಲಕ್ಕೆ ಆಗಿರುವ ಅನುಭಾವವಿಕಾಸದ ಕುರುಹಾಗಿದೆ. ಈ ದೃಷ್ಟಿಯಿಂದ ಏಕೋತ್ತರ ಶತಸ್ಥಲಗಳಲ್ಲಿ ಭಕ್ತ ಮೊದಲಾದ ಆರು  
ಸ್ಥಲಗಳಲ್ಲಿ ಜೀವಪಿಂಡ, ಪಿಂಡಜ್ಞಾನಿ ಮುಂತಾದ ಅವಾಂತರ ಪ್ರಭೇದಗಳು ಕಂಡುಬರುತ್ತವೆ.

ಅಂಗಸ್ಥಲದಲ್ಲಿ ಉಕ್ತವಾದ 44 ಪ್ರಭೇದಗಳು ಅನುಷ್ಠಾನದಿಂದ ಸಾಧಕ ಜೀವನ್ಮುಕ್ತಸ್ಥಿತಿಯನ್ನು ಪಡೆಯುತ್ತಾನೆ. ಆಗ ಅವನಿಗೆ ಶಿವಯೋಗಿ ಎಂಬ ಉಪಾಧಿ ಲಭಿಸುತ್ತದೆ. ಗುರು-ಜಂಗಮ ಪದವಿಯ ಅಧಿಕಾರಿಗಳ ಆಚಾರವಿಚಾರಗಳು ಜೀವನ್ಮುಕ್ತಾತ್ಮನ ಬಗೆಯನ್ನೇ  ಬಣ್ಣಿಸುತ್ತವೆ. ಇಲ್ಲಿ 44 ಪ್ರಭೇದಗಳ ಸಂಗ್ರಹವಿವರಣೆ ಇದೆ. ಬೀಜವೃಕ್ಷನ್ಯಾಯಸ್ಥಲವೆಂದು ಪ್ರಸಿದ್ಧವಿರುವ ಭಕ್ತಸ್ಥಲದಲ್ಲಿ ಪಿಂಡ, ಪಿಂಡಜ್ಞಾನ, ಸಂಸಾರಹೇಯ, ಗುರುಕಾರುಣ್ಯ, ಲಿಂಗಧಾರಣ, ಭಸ್ಮಧಾರುಣ, ರುದ್ರಾಕ್ಷಧಾರಣ, ಪಂಚಾಕ್ಷರ ಜಪ, ಭಕ್ತಮಾರ್ಗ ಕ್ರಿಯಾ, ಉಭಯ, ತ್ರಿವಿಧಸಂಪತ್ತಿ, ಪ್ರಸಾದ ಸ್ವೀಕಾರ, ಸೋಪಾಧಿದಾನ, ನಿರುಪಾಧಿದಾನ, ಸಹಜದಾನ-ಎಂಬ ಹದಿನೈದು ಸ್ಥಲಗಳಿವೆ. ಇವು ಭಕ್ತನ ಆಚಾರವಿಚಾರಗಳನ್ನು ಸೂಚಿಸುತ್ತವೆ. ಇಲ್ಲಿ ಭಕ್ತನಲ್ಲಿ ಬೀಜರೂಪದಿಂದ ಪ್ರವೇಶಿಸಿದ ಭಕ್ತಿಯೇ ಬೆಳೆದು ತರುವಾಗಿ ಮುಕ್ತಿಫಲ ನೀಡುತ್ತದೆ.

ಸಲಿಲಮುಕ್ತನ್ಯಾಯಸ್ಥಲವೆಂದು ಪ್ರಸಿದ್ಧವಿರುವ ಮಹೇಶಸ್ಥಲದಲ್ಲಿ ಮಹೇಶ್ವರಪ್ರಶಂಸಾ, ಲಿಂಗನಿಷ್ಠಾ, ಪುರ್ವಾಶ್ರಯ ನಿರಸನ, ಸರ್ವಾದ್ವೈತ ನಿರಸನ, ಆಹ್ವಾನ ನಿರಸನ, ಅಷ್ಟಮೂರ್ತಿ ನಿರಸನ, ಸರ್ವಗತತ್ತ್ವ ನಿರಸನ, ಶಿವಜಗನ್ಮಯತ್ವ, ಭಕ್ತದೇಹಿಕ ಲಿಂಗ ಎಂಬ ಒಂಬತ್ತು ಸ್ಥಲಗಳು ಉಕ್ತವಾಗಿವೆ. ಇವುಗಳ ಅನುಷ್ಠಾನದಿಂದ ಭಕ್ತನಲ್ಲಿ ಶ್ರದ್ಧೆ ಘನೀಭೂತವಾಗಿ ನಿಷ್ಠೆಯೆನಿಸುವುದು. ಅನಲಕಾಷ್ಠನ್ಯಾಯಸ್ಥಲವೆನಿಸಿದ ಪ್ರಸಾದಿಸ್ಥಲದಲ್ಲಿ ಅವಧಾನ (ಏಕಾಗ್ರತೆ) ಭಕ್ತಿವಿಶಿಷ್ಟನಾದ ಮಾಹೇಶನೇ ಪ್ರಸನ್ನ ಮನಃಪರಿಪಾಕವನ್ನು ಪಡೆದು  ಪ್ರಸಾದಿಯೆನಿಸುತ್ತಾನೆ. ಇಲ್ಲಿಯ ಏಳು ಪ್ರಭೇದಗಳು ಸಾಧಕನ ಮನಃಪ್ರಸನ್ನತೆಯ ಕುರುಹುಗಳು. ಅವು ಕ್ರಮವಾಗಿ ಪ್ರಸಾದಿ, ಗುರುಮಾಹಾತ್ಮ್ಯ, ಲಿಂಗಮಾಹಾತ್ಮ್ಯ, ಜಂಗಮಮಾಹಾತ್ಮ್ಯ, ಭಕ್ತಮಾಹಾತ್ಮ್ಯ, ಶರಣಮಾಹಾತ್ಮ್ಯ, ಪ್ರಸಾದಮಾಹಾತ್ಮ್ಯ ಎಂದು ಏಳು ಹಂತಗಳಲ್ಲಿವೆ. ಭ್ರಮರಕೀಟನ್ಯಾಯಸ್ಥಲವೆನಿಸಿದ ಪ್ರಾಣಲಿಂಗಿಸ್ಥಲದಲ್ಲಿ ಸಾಧಕನಿಗೆ ಲಿಂಗವೇ ಪ್ರಾಣ, ಪ್ರಾಣವೇ ಲಿಂಗ ಎಂಬ ಅನುಭವ ವಾಗುತ್ತದೆ. ಇದನ್ನು ಇಲ್ಲಿನ ಪ್ರಭೇದಗಳಲ್ಲಿ ಗುರುತಿಸಬಹುದು. ಪ್ರಾಣಲಿಂಗಿ, ಪ್ರಾಣಲಿಂಗಾರ್ಚನ, ಶಿವಯೋಗ ಸಮಾಧಿ, ಲಿಂಗನಿಜ,  ಅಂಗಲಿಂಗ-ಎಂದು ಇಲ್ಲಿ ಐದು ವಿಭಾಗಗಳಿವೆ. ಸತೀಪತಿ ನ್ಯಾಯಸ್ಥಲವೆಂದು ಹೆಸರಾದ ಶರಣಸ್ಥಲದಲ್ಲಿ ಶರಣ ಸತಿಲಿಂಗ ಪತಿ ಎಂಬ ಅನುಭವ ಸಾಧಕನಿಗೆ ಉಂಟಾಗಿ ಆತ ಆನಂದ ಭಕ್ತಿಮಗ್ನನಾಗುವ ಕುರುಹುಗಳು ಕಂಡು ಬರುತ್ತವೆ. ಶರಣ, ತಾಮನಿರಸನ, ನಿರ್ದೇಶ, ಶೀಲಸಂಪಾದನ ಎಂಬ ನಾಲ್ಕು ಹಂತಗಳು ಇಲ್ಲಿವೆ. ಶಿಖೀಕರ್ಪೂರನ್ಯಾಯಸ್ಥಲವೆಂದು ಪ್ರಸಿದ್ಧವಿರುವ ಐಕ್ಯಸ್ಥಲದಲ್ಲಿ ಆನಂದಪರವಶವಾದ ಜೀವ ಸಮರಸಭಕ್ತಿಯ ಪ್ರಭಾವದಿಂದ ಶಿವನಲ್ಲಿ ಬೆರೆದು ಬೇರಿಲ್ಲದ ಸ್ಥಿತಿಯನ್ನೈದುವನು. ಐಕ್ಯ, ಆಚಾರಸಂಪತ್ತಿ, ಏಕಭಾಜನ,  ಸಹಭಾಜನ ವೆಂಬ ಇಲ್ಲಿನ ನಾಲ್ಕು ಹಂತಗಳಲ್ಲಿ ಸಮರತೆಯ ಸೂಕ್ಷ್ಮವಿಕಾಸವನ್ನು ಕಾಣಬಹುದು.

ದೀಕ್ಷಾಗುರುಸ್ಥಲ ಮೊದಲಾಗಿ ಜ್ಞಾನಶೂನ್ಯಸ್ಥಲದವರೆಗಿರುವ 57 ಲಿಂಗಸ್ಥಲಗಳು ಕೂಡ ಭಕ್ತಾದಿ ಆರು ಸ್ಥಲಗಳನ್ನೇ ಆಶ್ರಯಿಸಿವೆ. ಎಂದರೆ ಜೀವನ್ಮುಕ್ತನೂ ಸಹ ತನ್ನ ನಿತ್ಯಾಚರಣೆಯಲ್ಲಿ ಭಕ್ತಾದಿ ಷಟ್ಸ್ಥಲಗಳನ್ನು ಅನುಷ್ಠಾನದಲ್ಲಿಟ್ಟುಕೊಂಡಿರಬೇಕು. ಏಕೆಂದರೆ ಇದರಿಂದ ಆತ ಗಳಿಸಿರುವ ಜೀವನ್ಮುಕ್ತಸ್ಥಿತಿ ದೇಹಾವಸಾನದವರೆಗೆ ದೃಢವಾಗಿರುವುದಲ್ಲದೆ ಇದರಿಂದ ಉಳಿದ ಸಾಧಕರಿಗೆ ಮಾರ್ಗದರ್ಶನವೂ ಆಗುತ್ತದೆ. ದೀಕ್ಷಾಗುರು, ಶಿಕ್ಷಾಗುರು, ಜ್ಞಾನಗುರು, ಕ್ರಿಯಾಗುರು, ಭಾವಲಿಂಗ, ಜ್ಞಾನಲಿಂಗ, ಸ್ವಸ್ಥಲ, ಚರಸ್ಥಲ, ಪರಸ್ಥಲವೆಂಬ ಒಂಬತ್ತು ಪ್ರಭೇದಗಳನ್ನೊಳಗೊಂಡ ಆಚಾರಲಿಂಗ ಸ್ಥಲದಲ್ಲಿ ಜೀವನ್ಮುಕ್ತನಾದ ಶಿವಯೋಗಿ ದೇಹಾಭಿಮಾನವನ್ನು ತೊರೆದು ತನ್ನ ದರ್ಶನಾದಿಗಳಿಂದ ಲೋಕವನ್ನು ಪಾವನವನ್ನಾಗಿ ಮಾಡುತ್ತಾನೆ. ಇದು ಭಕ್ತಸ್ಥಲಕ್ಕೆ ಸಂವಾದಿಯಾಗಿದೆ. ಕ್ರಿಯಾಗಮ, ಭಾವಾಗಮ, ಜ್ಞಾನಾಗಮ, ಸಕಾಯ, ಅಕಾಯ, ಪರಕಾಯ, ಧರ್ಮಾಚಾರ, ಭಾವಾಚಾರ ಮತ್ತು ಜ್ಞಾನಾಚಾರಗಳೆಂಬ ಹತ್ತು ಭಾಗಗಳನ್ನುಳ್ಳ ಗುರುಲಿಂಗಸ್ಥಲ ಮಾಹೇಶಸ್ಥಲಕ್ಕೆ ಸಂವಾದಿಯಾಗಿದೆ. ಇದರಲ್ಲಿ ಜೀವನ್ಮುಕ್ತ ಸುಜ್ಞಾನದಿಂದ ಪ್ರಾಕೃತಾತ್ಮ ಪ್ರಪಂಚ ಅಳಿದಿರಲು ದಿವ್ಯಯೋಗಿಯೆನಿಸಿರುತ್ತಾನೆ. ಕಾಯಾನುಗ್ರಹ, ಇಂದ್ರಿಯಾನುಗ್ರಹ, ಪ್ರಾಣಾನುಗ್ರಹ, ಕಾಯಾರ್ಪಣ, ಕರಣಾರ್ಪಣ, ಭಾವಾರ್ಪಣ, ಶಿಷ್ಯ, ಶುಶ್ರೂಷೆ, ಸೇವ್ಯ ಎಂಬ ಒಂಬತ್ತು ಬಗೆಗಳನ್ನುಳ್ಳ ಶಿವಲಿಂಗಸ್ಥಲ ಪ್ರಸಾದಿ ಸ್ಥಲಕ್ಕೆ ಸಂವಾದಿಯಾಗಿದ್ದು ಇಲ್ಲಿ ಸಾಧಕ ಉಂಡೂ ಉಪವಾಸಿ, ಬಳಸಿಯೂ ಬ್ರಹ್ಮಚಾರಿ ಎಂಬಂತೆ ವಿಷಯಸಂಗರಹಿತನಾಗಿ ಅನಾಸಕ್ತಸ್ಥಿತಿಯನ್ನೈದುತ್ತಾನೆ. ಆತ್ಮ, ಅಂತರಾತ್ಮ, ಪರಮಾತ್ಮ, ನಿರ್ದೇಹಾಗಮ, ನಿರ್ಭಾವಾಗಮ, ನಷ್ಟಾಗಮ, ಆದಿಪ್ರಸಾದಿ, ಅಂತ್ಯಪ್ರಸಾದಿ, ಸೇವ್ಯಪ್ರಸಾದಿ ಎಂಬ ವಿವಿಧ ಪ್ರಭೇದಗಳನ್ನುಳ್ಳ ಜಂಗಮ ಲಿಂಗಸ್ಥಲ ಪ್ರಾಣಲಿಂಗಸ್ಥಲಕ್ಕೆ ಸಂವಾದಿಯಾಗಿದೆ. ಇಲ್ಲ ಶಿವಯೋಗಿ ದೇಹಭ್ರಾಂತಿಯಳಿದು ಶಿವೈಕ್ಯಜ್ಞಾನಾರೂಢನಾಗುತ್ತಾನೆ. ದೀಕ್ಷಾಪಾದೋದಕ, ಶಿಕ್ಷಾಪಾದೋದಕ, ಜ್ಞಾನಪಾದೋದಕ, ಕ್ರಿಯಾನಿಷ್ಪತ್ತಿ, ಭಾವನಿಷ್ಪತ್ತಿ, ಜ್ಞಾನನಿಷ್ಪತ್ತಿ, ಪಿಂಡಾಕಾಶ, 

ಬಿಂದ್ವಾಕಾಶ, ಮಹಾಕಾಶ, ಕ್ರಿಯಾಪ್ರಕಾಶ, ಭಾವಪ್ರಕಾಶ, ಜ್ಞಾನಪ್ರಕಾಶ ಎಂಬ ವಿವಿಧ ಸ್ತರಗಳನ್ನುಳ್ಳ ಪ್ರಸಾದಲಿಂಗಸ್ಥಲ ಶರಣಸ್ಥಲಕ್ಕೆ ಸಂವಾದಿಯಾಗಿದೆ. ಇಲ್ಲಿ ಶಿವಾದ್ವೈತಜ್ಞಾನದಲ್ಲಿದ್ದು ಭಕ್ತ ಸಂಸಾರದಿಂದ ವಿಮುಕ್ತನಾಗುತ್ತಾನೆ. ಸ್ವೀಕೃತ ಪ್ರಸಾದ, ಶಿಷ್ಟ್‌ದನ, 

ಚರಾಚರಲಯ, ಭಾಂಡ, ಭಾಜನ, ಅಂಗಾಲೇಪನ, ಸ್ವಪರಾಜ್ಞ, ಭಾವಾಭಾವಲಯ, ಜ್ಞಾನಶೂನ್ಯ ಎಂಬ ಒಂಬತ್ತು ಪ್ರಭೇದಗಳ ಮಹಾಲಿಂಗಸ್ಥಲ ಐಕ್ಯಸ್ಥಲಕ್ಕೆ ಸಂವಾದಿಯಾಗಿದೆ. ಈ ಸ್ಥಲಗಳ ಅಂತಿಮ ಫಲವೇ ಸಾಮರಸ್ಯಮುಕ್ತಿ.
ಸ್ಥಲ ಶಬ್ದದ ವ್ಯಾಖ್ಯಾನಕ್ಕೂ ಏಕೋತ್ತರಶತಸ್ಥಲಗಳ ಮೂಲಾಧಾರಗಳಾದ ಷಟ್ಸ್ಥಲಗಳ ವಿವರಗಳಿಗೂ ನೋಡಿ - ಷಟ್ಸ್ಥಲ ಸಿದ್ಧಾಂತ.  (ಎಂ.ಜಿ.ಎನ್.; ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ